ಇತ್ತೀಚಿನ ಪ್ರಕಟಣೆಗಳು
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ
ಧಾರವಾಡ ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಹಾಗೂ ಅಧ್ಯಕ್ಷರು ಒಂದು ಹಿನ್ನೋಟ

ಕನ್ನಡ ನಾಡಿನ ಏಕೀಕರಣ ಹಾಗೂ ಇಪ್ಪತ್ತನೆಯ ಶತಮಾನದಿಂದ ಮೊದಲ್ಗೊಂಡಂತೆ ಕನ್ನಡ ನಾಡು, ನುಡಿ, ಸಾಹಿತ್ಯ, ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಾ ಬಂದಿರುವ ಸಾಹಿತ್ಯ ಸಮ್ಮೇಳನಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗಿವೆ. ಇದುವರೆಗೆ ಧಾರವಾಡ ಜಿಲ್ಲೆಯಲ್ಲಿ 5 ಸಮ್ಮೇಳನಗಳು ನಡೆದಿವೆ. ಜಿಲ್ಲೆಯಲ್ಲಿ ಈ ಹಿಂದೆ ನಡೆದಿರುವ ಎಲ್ಲ ಸಾಹಿತ್ಯ ಸಮ್ಮೇಳನಗಳು ಹಾಗೂ ಸಮ್ಮೇಳನಾಧ್ಯಕ್ಷರ ಭಾಷಣದ ಸಂಗ್ರಾಹ್ಯ ವಿವರಗಳನ್ನು ನೀಡಲಾಗಿದೆ,

4ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಅಧ್ಯಕ್ಷರು: ಆರ್. ನರಸಿಂಹಾಚಾರ್
ದಿನಾಂಕ 11, 12, 13 ಮೇ 1918
ಸ್ಥಳ: ಧಾರವಾಡ

ಸ್ವಾಗತಮಂಡಳಿ ವ್ಯವಸ್ಥೆ ಬಗ್ಗೆ ಸಮ್ಮೇಳನಾಧ್ಯಕ್ಷರಾದ ಶ್ರೀ ಆರ್. ನರಸಿಂಹಾಚಾರ್ ಅವರ ಅಭಿಪ್ರಾಯ:

ಸ್ವಾಗತಮಂಡಲಿಯವರು ಸಮ್ಮೇಳನಕ್ಕೆ ಬಂದಿರುವ ಪ್ರತಿನಿಧಿಗಳ ಮಾನಸಿಕ ಸುಖ ಮತ್ತು ಶಾರೀರಿಕ ಸುಖ ಇವುಗಳಿಗಾಗಿ ಮಾಡಿದ ಏರ್ಪಾಡುಗಳು ಬಹಳ ಶ್ಲಾಘನೀಯವಾಗಿವೆ. ನಾಟಕ, ಸಂಗೀತ, ಹರಿಕಥೆ, ಪಾಂಡಿತ್ಯಸೂಚಕವಾದ ನಿಬಂಧಗಳು, ನಾನಾ ಪ್ರಾಂತಗಳ ಕನ್ನಡಿಗರ ಪರಸ್ಪರದರ್ಶನ ಸಲ್ಲಾಪಾದಿಗಳಿಗೆ ಅವಕಾಶ-ಇವೆಲ್ಲವೂ ಮನಸ್ಸಿಗೆ ಹೇರಳವಾಗಿ ಆನಂದವನ್ನುಂಟುಮಾಡಿವೆ. ಇನ್ನು ಶರೀರಸೌಖ್ಯಕ್ಕೆ ಮಾಡಿದ ಆನುಕೂಲ್ಯವಾದರೋ ವರ್ಣನಾತೀತವಾಗಿದೆ.19ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಅಧ್ಯಕ್ಷರು: ವೈ. ನಾಗೇಶಶಾಸ್ತ್ರಿ
ದಿನಾಂಕ 29, 30, 31 ಡಿಸೆಂಬರ್ 1933
ಸ್ಥಳ : ಹುಬ್ಬಳ್ಳಿ

ಸಾಹಿತ್ಯ ಪರಿಷತ್ತಿನಿಂದ ಆಗಿರುವ ಪ್ರಯೋಜನಗಳ ಕುರಿತು 19ನೇ ಸಮ್ಮೇಳನಾಧ್ಯಕ್ಷರಾದ ವೈ. ನಾಗೇಶಶಾಸ್ತ್ರಿ ಅವರ ಅಭಿಪ್ರಾಯಗಳು:

ಈ ಪರಿಷತ್ತಿನಿಂದ ಆಗಿರುವ ಪ್ರಯೋಜನಗಳಲ್ಲಿ ಮುಖ್ಯವಾದುದೆಂದರೆ ಸಮ್ಮೇಳನಗಳನ್ನು ನಡೆಸುವುದು. ಈ ಕಾರ್ಯವು ಅತಿಮಹತ್ವದ್ದೆಂದು ನನ್ನ ಭಾವನೆ. ಪಂಡಿತರೂ ಕವಿಗಳೂ ಮೊದಲಾದ ಸಾಹಿತ್ಯಜ್ಞರು ಒಬ್ಬರಿಗೊಬ್ಬರು ಕೂಡಿ ಮೈತ್ರಿಯಿಂದ ಮಾತನಾಡುವುದೇ ಅಪೂರ್ವ. ಒಬ್ಬರಿಗೊಬ್ಬರು ಮತ್ಸರಗೊಳ್ಳುವುದು ಅವರ ಸ್ವಭಾವ. ಈ ಮತ್ಸರದಿಂದ, ಆಗಬಾರದ ಕೆಲಸವಾಗಿ ಜನತೆಯ ಬಾಳೇ ಹಾಳಾಗುತ್ತಿರುವುದು ನಮ್ಮೆಲ್ಲರ ಅನುಭವ. ಸಮ್ಮೇಳನಗಳು ಇಂತಹ ದೋಷಗಳನ್ನು ಕಳೆದು ಗೆಳೆತನವನ್ನು ಬೆಳೆಯಿಸುವುವು. ಸಾಹಿತ್ಯಜ್ಞರಲ್ಲಿ ಗೆಳೆತನವುಂಟಾದರೆ ಜಗತ್ತಿಗೆ ಮಹೋಪಕಾರವಾಯಿತೆಂದೇ ಹೇಳಬಹುದು. ನಮ್ಮೆಲ್ಲರನ್ನೂ ಅಂತಹ ಸ್ನೇಹರಜ್ಜುವಿನಿಂದ ಬಂಧಿಸಿ ಒಗ್ಗಟ್ಟಿನಲ್ಲಿರಿಸಿ ಹುರಿದುಂಬಿಸಿ ಭಾಷಾಸೇವೆಯನ್ನೂ ತನ್ಮೂಲಕ ದೇಶಸೇವೆಯನ್ನೂ ಮಾಡಲು ಮುಂದುವರಿಸುವುದಕ್ಕಾಗಿಯೇ ಇಂತಹ ಸಮ್ಮೇಳನಗಳು ನಡೆಯುವುವು. ಪರಿಷತ್ತಿನಿಂದ ಪ್ರಯೋಜನಗಳಲ್ಲಿ ಇದು ಮುಖ್ಯವಲ್ಲವೇ? ಈ ಸಮ್ಮೇಳನವು ಕವಿಗಳ, ಪತ್ರಿಕಾಕರ್ತರ, ನಾಯಕರ, ವಾಗ್ಮಿಗಳ, ಇನ್ನು ಸಾಹಿತ್ಯಾಂಗಗಳಾದ ಇತರ ಕಲೆಗಳನ್ನು ಬಲ್ಲವರ ಸಮ್ಮೇಳನಗಳನ್ನು ಈಗ ನಡೆಸುವುದಕ್ಕಿಂತಲೂ ಹೆಚ್ಚಾಗಿ ನಡೆಯಿಸಿ ಪ್ರೋತ್ಸಾಹವನ್ನುಂಟುಮಾಡಿದರೆ ಕನ್ನಡ ಸಾಹಿತ್ಯದೇವಿಯು ಸವಾರ್ಂಗಸುಂದರಳಾಗಿ ರಾರಾಜಿಸುವುದರಲ್ಲಿ ಸಂಶಯವಿಲ್ಲ

ಈ ಪರಿಷತ್ತು ಸ್ಥಾಪಿತವಾದಂದಿನಿಂದ ವಿಶ್ವವಿದ್ಯಾಪೀಠಗಳಿಗೂ, ರಾಜ್ಯಾಧಿಕಾರಿಗಳಿಗೂ ಸ್ಥಾನಿಕ ಸಂಸ್ಥೆಗಳ ಅಧಿಕಾರಿಗಳಿಗೂ, ಭಾಷಾಸೇವೆಯ ಸಂಸ್ಥೆಗಳಿಗೂ ಕಾಲಕಾಲಕ್ಕೆ ತಕ್ಕ ಸೂಚನೆಗಳನ್ನು ಸಮ್ಮೇಳನದಲ್ಲಾಗುವ ಗೊತ್ತುವಳಿಗಳ ಮೂಲಕವಾಗಿ ತಿಳಿಸುತ್ತ ಕನ್ನಡ ಭಾಷೆಯನ್ನೂ ಸಾಹಿತ್ಯವನ್ನೂ ಉತ್ತಮಗೊಳಿಸಿ ಅಭಿವೃದ್ಧಿಪಡಿಸುತ್ತಿರುವುದು ಮುಖ್ಯ ಪ್ರಯೋಜನವಲ್ಲವೆ? ಇದರಂತೆ ಗ್ರಂಥಗಳನ್ನು ಶೋಧಿಸಿ ಪ್ರಕಟಿಸುವುದೂ, ಉತ್ತಮ ರೀತಿಯ ಪರಿಷತ್ಪತ್ರಿಕೆಯೊಂದನ್ನು ಪ್ರಕಟಿಸುತ್ತಿರುವುದೂ, ಗ್ರಂಥಕರ್ತರಿಗೆ ಪ್ರೋತ್ಸಾಹವನ್ನೀಯುವುದೂ-ಇವೇ ಮೊದಲಾದ ಪ್ರಯೋಜನಗಳಾಗಿರುವುದು ತಮಗೆ ತಿಳಿದ ವಿಷಯವಾಗಿದೆ.


25ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಅಧ್ಯಕ್ಷರು : ವೈ ಚಂದ್ರಶೇಖರಶಾಸ್ತ್ರಿ
ದಿನಾಂಕ 27,28,29 ಡಿಸೆಂಬರ್ 1940
ಸ್ಥಳ : ಧಾರವಾಡ

ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ ಹಿರೇಮಠರು ವೀರಶೈವ ಸಾಹಿತ್ಯದಲ್ಲಿ ಪ್ರಕಾಂಡ ಪಂಡಿತರು. ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದಲ್ಲಿ 3-1-1892ರಲ್ಲಿ ಪಟ್ಟದಯ್ಯ ಮತ್ತು ಬಸವಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಬ್ಯಾಡಗಿ ಹಾವೇರಿ ಗದಗುಗಳಲ್ಲಿ ಮುಗಿಸಿ ಕಾಶಿ, ಕಲ್ಕತ್ತ ಸಂಸ್ಕೃತ ಕೇಂದ್ರಗಳಿಗೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು. 1924ರಲ್ಲಿ ವ್ಯಾಕರಣ ತೀರ್ಥ ಪದವಿಯನ್ನು ಸಾಹಿತ್ಯಾಚಾರ್ಯ ಪದವಿಯನ್ನು ಪಡೆದು ಕರ್ನಾಟಕಕ್ಕೆ ಹಿಂದಿರುಗಿದರು.

ಕರ್ನಾಟಕಕ್ಕೆ ಹಿಂದಿರುಗಿದ ಮೇಲೆ ಯಾದಗಿರಿಯಲ್ಲಿ ಶಂಕರ ಸಂಸ್ಕೃತ ಕಾಲೇಜು ಸ್ಥಾಪಿಸಿ 1924ರಿಂದ ಅದರ ಪ್ರಿನ್ಸಿಪಾಲರಾದರು. ಹುಬ್ಬಳ್ಳಿಯ ಜಗದ್ಗುರು ಗಂಗಾಧರ ಸಂಸ್ಕೃತ ಕಾಲೇಜನ್ನು ಸ್ಥಾಪಿಸಿದರು. 1931ರಿಂದ 1938ರವರೆಗೆ ಸಂಸ್ಕೃತ ಮುಖ್ಯಾಧ್ಯಾಪಕರಾಗಿ ದುಡಿದರು.

1933ರಲ್ಲಿ ಹುಬ್ಬಳ್ಳಿಯಲ್ಲಿ ಸಮಾವೇಶಗೊಂಡಿದ್ದ 19ನೇ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದರು. ಅನೇಕ ಗ್ರಂಥಗಳನ್ನು ಪರಿಶೋಧಿಸಿ ಪರಿಷ್ಕರಿಸಿ ಪ್ರಕಟಿಸಿದರು. ಹಂಪೆಯಲ್ಲಿ ನಡೆದ ವಿಜಯನಗರ ಸಾಮ್ರಾಜ್ಯದ 6ನೇ ಶತಮಾನೋತ್ಸವ ಕಾರ್ಯಕ್ರಮದ ಸಮಿತಿಯ ಕಾರ್ಯದರ್ಶಿಯಾಗಿ ಶ್ರಮಿಸಿದ್ದಾರೆ. 25ಕ್ಕೂ ಹೆಚ್ಚಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ದಾಖಲೆ ಸ್ಥಾಪಿಸಿದ್ದಾರೆ.


39ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಅಧ್ಯಕ್ಷರು: ಕೆ.ವಿ.ಪುಟ್ಟಪ್ಪ
ದಿನಾಂಕ: 7, 8, 9 ಮೇ 1957
ಸ್ಥಳ: ಧಾರವಾಡ

ಕನ್ನಡದ ಮಹಾಕವಿ ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ವೆಂಕಟಪ್ಪಗೌಡ- ಸೀತಮ್ಮ ದಂಪತಿಗಳಿಗೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ 29-12-1904ರಲ್ಲಿ ಜನಿಸಿದರು. 1916ರಲ್ಲಿ ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ 1929ರಲ್ಲಿ ಎಂ.ಎ. ಪದವಿ ಗಳಿಸಿದರು.

1929ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ಪ್ರಿನ್ಸಿಪಾಲರಾಗಿ 1956ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ 1960ರಲ್ಲಿ ನಿವೃತ್ತರಾದರು.

ಕುವೆಂಪು ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದರು. ಅವರು ಕನ್ನಡಕ್ಕೆ ನೀಡಿದ ಕೊಡುಗೆಗಳಿಗಾಗಿ ಕನ್ನಡದ ಸಾಹಿತ್ಯಗಳನ್ನು ರಚಿಸಿದ್ದಕ್ಕಾಗಿ ಅವರಿಗೆ ಅನೇಕ ಮನ್ನಣೆ ಪ್ರಶಸ್ತಿಗಳು ದೊರೆತವು. ಮೈಸೂರಿನಲ್ಲಿ ನಡೆದ 38ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾದರು. ಧಾರವಾಡದಲ್ಲಿ 1957ರಲ್ಲಿ ನಡೆದ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿಯನ್ನೂ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದರು.

ಬೆಂಗಳೂರು ವಿಶ್ವವಿದ್ಯಾನಿಲದಿಂದ 1969ರಲ್ಲಿ ಗೌರವ ಡಿ.ಲಿಟ್. ಲಭಿಸಿತು. ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿಗಳು ಕುವೆಂಪು ಅವರ ದೈತ್ಯಸಾಹಿತ್ಯ ಪ್ರತಿಭೆಗೆ ಸಿಕ್ಕ ಪುರಸ್ಕಾರಗಳಾಗಿವೆ.

1968ರಲ್ಲಿ ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇದು ಕನ್ನಡದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಆಗಿದೆ. 1995ರಲ್ಲಿ ನಾಡೋಜ ಪ್ರಶಸ್ತಿಯನ್ನು ಅವರಿಗೆ ಮರಣೋತ್ತರ ನೀಡಲಾಯಿತು. 1985ರಲ್ಲಿ ಮೈಸೂರಿನಲ್ಲಿ ನಡೆದ ಮೊದಲನೇ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು.

ಅಪಾರ ಅನುಪಮ ಸಾಹಿತ್ಯ ರಚನೆ ಮಾಡಿದ್ದ ಕುವೆಂಪು ಅವರು, ಕವನ ಸಂಕಲನ, ಖಂಡಕಾವ್ಯ, ಮಹಾಕಾವ್ಯಗಳನ್ನು ರಚಿಸಿದರು. ಅನುವಾದಿತ ಮತ್ತು ಸ್ವತಂತ್ರ ನಾಟಕಗಳನ್ನು ಬರೆದರು. ಕಾದಂಬರಿ, ಕಥೆ, ಗದ್ಯಚಿತ್ರ. ಆತ್ಮಚರಿತ್ರೆ, ಭಾಷಾಂತರ ಗ್ರಂಥಗಳನ್ನು ರಚಿಸಿದರು. ಮಾಸ್ತಿ ಜತೆ ಕರ್ಣಾಟಕ ಭಾರತ ಕಥಾಮಂಜರಿಯನ್ನು ಸಂಪಾದಿಸಿದ್ದಾರೆ.

ಪರಿಷತ್ತಿನ ಮುಂದಿನ ಗುರಿ ಕುರಿತು ಕುವೆಂಪು ಅವರ ಅಭಿಪ್ರಾಯ:

ಕನ್ನಡ ಜನರ ಆಶೋತ್ತರ ಮತ್ತು ಕರ್ಣಾಟಕ ಸಂಸ್ಕೃತಿಯ ಪ್ರತಿನಿಧಿಯಾದ ಕನ್ನಡ ಸಾಹಿತ್ಯ ಪರಿಷತ್ತು ಸದ್ಯಕ್ಕೆ ನಮ್ಮ ಅಭ್ಯುದಯಕ್ಕೆ ಆವಶ್ಯಕವಾದ ಭೌಗೋಲಿಕ ಚೌಕಟ್ಟನ್ನು ಸಾಧಿಸಿದೆ. ನವಮೈಸೂರು ರಾಜ್ಯದ ಆ ಚೌಕಟ್ಟಿನ ಮೇಲೆ ನಮ್ಮ ಸಂಸ್ಕೃತಿಯ ಆದರ್ಶದ ‘ಕರ್ಣಾಟಕ’ವನ್ನು ಕಟ್ಟಬೇಕಾಗಿದೆ. ಇದುವರೆಗೆ ಪರಿಷತ್ತಿನ ವಾರ್ಷಿಕ ಸಮ್ಮೇಳನ ಸ್ವಲ್ಪ ಹೆಚ್ಚು ಕಡಮೆ ಉತ್ಸವರೂಪದ ಪ್ರಚ್ಛನ್ನ ರಾಜಕೀಯ ಚಳುವಳಿಯಾಗಿಯೆ ಸಾಗುತ್ತಿತ್ತು. ಇನ್ನು ಮೇಲೆ ಈ ವಾರ್ಷಿಕ ಸಮ್ಮೇಳನ ಮಾತ್ರವಾಗಿ ಪರ್ಯವಸಾನ ಹೊಂದುವುದರಲ್ಲಿ ಔಚಿತ್ಯವಿಲ್ಲ, ಇದು ಸಾಹಿತ್ಯಕ್ಷೇತ್ರದ ಶ್ರಮಜೀವಿಗಳ ಮತ್ತು ಕಲಾಸಾಧಕರ ವಾರ್ಷಿಕ ಸಾಹಸಸಿದ್ಧಿಗಳ ಪರೀಕ್ಷೆಯ ನಿಕಷವೇದಿಕೆಯಾಗಿ ಪರಿಣಮಿಸಬೇಕು. ನಮ್ಮ ನೆರೆಯ ಸೋದರ ಭಾಷಾಸಾಹಿತ್ಯಗಳೊಡನೆ ಹೆಚ್ಚು ಹೆಚ್ಚು ಸಂಪರ್ಕ ಬೆಳೆಯಲು ಪರಸ್ಪರ ಹೃದಯ ಪರಿಚಯದ ಮೈತ್ರಿ ಸಾಧನೆಯ ರಂಗವಾಗಿ ಪರಿವರ್ತಿತವಾಗಬೇಕು. ಅಖಿಲ ಭಾರತೀಯವಾದ ಯಾವ ಮಹೋದ್ದೇಶದಿಂದ ಸಾಹಿತ್ಯ ಅಕಾಡೆಮಿ ಪ್ರೇರಿತವಾಗಿ ವಿವಿಧ ಕಾರ್ಯಗಳಲ್ಲಿ ಪ್ರವೃತ್ತವಾಗಿದೆಯೊ ಅದರ ಪ್ರಾದೇಶಿಕ ಪ್ರತಿನಿಧಿಯಾಗಬೇಕು. ಕರ್ಣಾಟಕದ ವಿವಿಧ ಸಂಸ್ಥೆಗಳಲ್ಲಿ ವಿವಿಧ ಸಂಘಗಳಲ್ಲಿ ವಿವಿಧ ವ್ಯಕ್ತಿಗಳಲ್ಲಿ ರೂಪುಗೊಳ್ಳುತ್ತಿರುವ ಮತ್ತು ಅಭಿವ್ಯಕ್ತವಾಗುತ್ತಿರುವ ಪುರೋಗಾಮಿಗಳಾದ ಹೃದಯದ ಮತ್ತು ಬುದ್ಧಿಯ ಶಕ್ತಿಗಳನ್ನೆಲ್ಲ ಕ್ರೋಢೀಕರಿಸಿ, ಅವುಗಳನ್ನು ತಾತ್ಕಾಲಿಕತೆಯ, ವಿಫಲತೆಯ, ಅಲ್ಪ ಮನೋರಂಜನೆಯ, ವಿಕೃತ ಕಲ್ಪನೆಯ, ಶೀಘ್ರಕೀರ್ತಿಯ, ಅಲ್ಪಪ್ರಯೋಜನದ ವ್ಯರ್ಥಸಾಹಸೋದ್ಯಮದಿಂದ ವಿಮುಖವನ್ನಾಗಿ ಮಾಡಿ, ರಕ್ಷಿಸಿ, ಮುಲೋದ್ದೇಶದ ಹಾಗೂ ಚಿರಂತನ ಪ್ರಯೋಜನದ ಕಡೆಗೆ ತಿರುಗಿ ಶಿಷ್ಟಸಂಕಲ್ಪನಿಷ್ಠವನ್ನಾಗಿ ಮಾಡಬೇಕು.


59ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಅಧ್ಯಕ್ಷರು, ಆರ್.ಸಿ. ಹಿರೇಮಠ
ದಿನಾಂಕ 16, 17, 18 ಫೆಬ್ರವರಿ 1990
ಸ್ಥಳ : ಹುಬ್ಬಳ್ಳಿ

ಕನ್ನಡದ ಭಾಷಾವಿಜ್ಞಾನಿ, ವಚನಶಾಸ್ತ್ರಕೋವಿದ ಸಂಶೋಧಕ ಆಗಿದ್ದ ಆರ್.ಸಿ. ಹಿರೇಮಠರು ರೋಣ ತಾಲ್ಲೂಕಿನ ಕುರುಡಗಿಯಲ್ಲಿ ಚಂದ್ರಯ್ಯ-ವೀರಮ್ಮ ದಂಪತಿಗಳಿಗೆ 15-1-1920ರಲ್ಲಿ ಜನಿಸಿದರು. ತಮ್ಮ ವಿದ್ಯಾಭ್ಯಾಸವನ್ನು ಧಾರವಾಡ, ಬೆಳಗಾಂಗಳಲ್ಲಿ ಪೂರೈಸಿದರು. ಮುಂಬೈ ವಿಶ್ವವಿದ್ಯಾಲಯದಿಂದ 1940ರಲ್ಲಿ ಕನ್ನಡ ಎಂ.ಎ.ಪದವಿ ಗಳಿಸಿದರು.

ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು 1951ರಲ್ಲಿ ಪಿಎಚ್.ಡಿ ಪದವಿ ಗಳಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮುಖ್ಯಸ್ಥರಾಗಿ ಕೊನೆಗೆ 1975ರಿಂದ 1980ವರೆಗೆ ಕುಲಪತಿಗಳಾಗಿ ವಿಶ್ವವಿದ್ಯಾನಿಲಯದ ಪ್ರಗತಿಗೆ ಶ್ರಮಿಸಿದರು. ಕನ್ನಡ ವಿಭಾಗ ಇವರ ಕಾಲದಲ್ಲಿ ಕನ್ನಡ ಅಧ್ಯಯನ ಪೀಠವಾಯಿತು. ಕುಲಪತಿಗಳಾಗಿ ನಿವೃತ್ತರಾದ ಅನಂತರ ತಿರುವನಂತಪುರದ ಅಂತರರಾಷ್ಟ್ರೀಯ ದ್ರಾವಿಡ ಭಾಷಾವಿಜ್ಞಾನದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಬಹುಕಾಲದ ನಿಕಟ ಸಂಬಂಧವನ್ನು ಹೊಂದಿದ್ದ ಇವರು ಪರಿಷತ್ತಿನ ಕನ್ನಡ-ಕನ್ನಡ ನಿಘಂಟಿನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

1990ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ 59ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾದ ಇವರು ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದರು. ವಿದ್ವತ್‍ಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದರು.

ಭಾಷಾಶಾಸ್ತ್ರ, ವೀರಶೈವ ಸಾಹಿತ್ಯ, ವಚನ ಸಾಹಿತ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿದ್ವತ್‍ಪೂರ್ಣ ಗ್ರಂಥಗಳನ್ನು ಸಂಪಾದಿಸಿದ ಹೆಗ್ಗಳಿಕೆ ಇವರದು.

ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು ಡಾ. ಆರ್.ಸಿ.ಹಿರೇಮಠ ಅವರ ಅಭಿಪ್ರಾಯ:

ಧಾರವಾಡದಲ್ಲಿರುವ ಕರ್ನಾಟಕ ವಿದ್ಯಾವರ್ಧಕ ಸಂಘ, ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು, ಈ ಸಂಸ್ಥೆಗಳು ಕನ್ನಡಿಗರ ತಪಸ್ಸಿನ ಫಲವಾಗಿ ಮೂಡಿ ಬಂದಿವೆ. ಕನ್ನಡಿಗರ ಸರ್ವತೋಮುಖ ಏಳ್ಗೆ ಈ ಸಂಸ್ಥೆಗಳ ಉದ್ದೇಶ. ಘನವಾದ ಈ ಉದ್ದೇಶ ಸಾಧನೆಯತ್ತ ಪರಿಷತ್ತು ನಿರಂತರ ಪ್ರಯತ್ನ ನಡೆಸಿದೆ. ಪರಿಷತ್ತು, ತನ್ನ ಪ್ರಕಟನೆ, ಕಮ್ಮಟ, ಜಾನಪದ ವಸ್ತುಸಂಗ್ರಹ, ಶಾಸನಶಾಸ್ತ್ರ, ಲಿಪಿಶಾಸ್ತ್ರ, ಬೋಧನೆ ಮುಂತಾದ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯಗಳಿಗೆ ಹೊಯ್‍ಕೆಯ್ ಎನಿಸುವಂತೆ ಕೆಲಸ ಮಾಡುತ್ತಿದ್ದಿತು. ಅದು ಒಂದು ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ಪಡೆಯುವ ಹಂತದಲ್ಲಿದ್ದಿತು. ಅಮೃತ ಮಹೋತ್ಸವ ಜೈತ್ರಯಾತ್ರೆ ನಡೆದು ಸಾರ್ವಜನಿಕರಿಂದ ಒಂದು ಕೋಟಿ ರೂಪಾಯಿ ನಿಧಿ ಸಂಗ್ರಹಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದಿತು. ಇಂತಹ ಸಮಯದಲ್ಲಿ ಸರಕಾರ ಹಠಾತ್ತನೆ, ಪೂರ್ವಭಾವಿ ಸೂಚನೆ ಕೊಡದೆ ಪರಿಷತ್ತಿನ ಆಡಳಿತ ಮಂಡಳವನ್ನು ರದ್ದುಪಡಿಸಿ ಹಸ್ತಕ್ಷೇಪ ಮಾಡಿದುದು ಪರಿಷತ್ತಿನ ಬೆಳವಣಿಗೆಗೆ ಅಘಾತವಾದಂತಾಯಿತು. ಅದರಿಂದ ಇನ್ನೂ ಪರಿಷತ್ತು ಚೇತರಿಸಿಕೊಂಡಿಲ್ಲ. ಸುಶಿಕ್ಷಿತರೂ ಸುಸಂಸ್ಕೃತರೂ ಆದ ಪರಿಷತ್ತಿನ ಸದಸ್ಯ ಸಾಹಿತ್ಯಿಕರು ಇದನ್ನು ಗಂಭೀರವಾಗಿ ಸಮಾಲೋಚನೆ ಮಾಡಬೇಕು.


ಇದೀಗ ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜನೆವರಿ 4, 5 ಹಾಗೂ 6, 2019ರಂದು ಮೂರು ದಿನಗಳ ಕಾಲ ನಡೆಯಲಿದೆ. ದೇಸಿ ಸೊಗಡಿನ ಕವಿ, ಕಾದಂಬರಿಕಾರ, ನಾಟಕಕಾರ, ಜ್ಞಾನಪೀಠ ಪ್ರಶಸ್ತಿಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ.

ವಿದ್ಯಾನಗರಿ, ಸಾಂಸ್ಕೃತಿಕ ಕೇಂದ್ರ ಎಂಬ ಹೆಗ್ಗಳಿಕೆ ಹೊಂದಿರುವ ಧಾರವಾಡದ ಹಿರಿಮೆ ಮತ್ತಷ್ಟು ಹೆಚ್ಚಾಗುವಂತೆ ಸಮ್ಮೇಳನ ಆಯೋಜಿಸಲು ಸ್ವಾಗತ ಸಮಿತಿ ಶ್ರಮಿಸುತ್ತಿದೆ. ವಿವಿಧ ಸುಮಾರು 16 ಉಪಸಮಿತಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಪ್ರಯತ್ನಿಸುತ್ತಿದ್ದಾರೆ. ಜಿಲ್ಲೆಯ ಪ್ರತಿಯೊಬ್ಬ ಸಹೃದಯ ಕನ್ನಡಿಗರು ಸಮ್ಮೇಳನದ ಯಶಸ್ವಿಗೆ ಟೊಂಕ ಕಟ್ಟಿ ದುಡಿಯಬೇಕಾಗಿದೆ. ಬನ್ನಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು ಕೈಜೋಡಿಸಿ.ಅಧ್ಯಕ್ಷರು, ಡಾ. ಚಂದ್ರಶೇಖರ ಕಂಬಾರ

ಪ್ರಕಟಣೆ:
ಅಖಿಲಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿ,
ಧಾರವಾಡ

© 2018-2019 | ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ, ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ Powered By Si Tech Solutions